ಕೇಲಿ, ಆರ್ಥರ್

	1821-1895. ಇಂಗ್ಲೆಂಡಿನ ಗಣಿತ ವಿಜ್ಞಾನಿ ಹಾಗೂ ಖಗೋಳಶಾಸ್ತ್ರಜ್ಞ (ಜನನ ಆಗಸ್ಟ್ 16, 1821) ಕೇಂಬ್ರಿಜ್‍ನಲ್ಲಿ ಉನ್ನತ ಗಣಿತ ವ್ಯಾಸಂಗ ನಡೆಸಿದ. 1842ರಲ್ಲಿ ಸ್ಮಿತ್ ಬಹುಮಾನ ವಿಜೇತನಾದ (ಅದನ್ನು ಪಡೆದವರಲ್ಲಿ ಇವನೇ ಮೊದಲಿನವ). ತರುವಾಯ ಅದೇ ಸಂಸ್ಥೆಯಲ್ಲಿ ಈತನಿಗೆ ತಾತ್ಕಾಲಿಕ ಉದ್ಯೋಗ ಲಭಿಸಿತು. ಇದರೊಂದಿಗೆ ನ್ಯಾಯಶಾಸ್ತ್ರವನ್ನು ಸಹ ಅಭ್ಯಸಿಸಿ ಅದರಲ್ಲೂ ಪದವಿ ಗಳಿಸಿದ(1849). ಈತ ವಕೀಲನಾಗಿದ್ದ 14 ವರ್ಷಗಳ ಅವಧಿಯಲ್ಲಿ 300ರಷ್ಟು ಗಣಿತ ಸಂಶೋಧನಪ್ರಬಂಧಗಳನ್ನು ಬರೆದು ಪ್ರಸಿದ್ಧಿಸಿದ. ಇವನ ನಿಶಿತ ಮನಸ್ಸಿನ ಜೀವಂತಿಕೆಗೂ ಸ್ವಂತಿಕೆಗೂ ಇವು ನಿದರ್ಶನಗಳು. ಸಹವಕೀಲನೂ ಗಣಿತ ವಿದ್ವಾಂಸನೂ ಆಗಿದ್ದ ಜೆ.ಜೆ. ಸಿಲ್ವೆಸ್ಟರ್‍ನೊಡನೆ ನಿರಂತರ ಒಡನಾಟ 1846ರಿಂದ ಕೇಲಿಗೆ ದೊರೆತದ್ದು ಒಂದು ಅಪೂರ್ವ ಯೋಗ. ಇವರು ಪರಸ್ಪರ ಪೂರಕರೂ ಪ್ರೇರಕರೂ ಆಗಿ ನೀಡಿದ ಗಣಿತ ಕೊಡುಗೆಗಳು ಅತ್ಯುತ್ಕøಷ್ಟ ಮಟ್ಟದವು. ರತ್ನಗಳನ್ನೂ ಮುತ್ತುಗಳನ್ನೂ ಉದುರಿಸುವುದು ಕೇಲಿಯ ಪ್ರವೃತ್ತಿ ಎಂದು ಸಿಲ್ವೆಸ್ಟರ್ ಹೇಳಿದ್ದುದಿತ್ತು. 1863ರಲ್ಲಿ ಕೇಲಿಯನ್ನು ಕೇಂಬ್ರಿಜ್‍ನ ಸ್ಯಾಡ್ಲೆರಿಯನ್ ಗಣಿತ ಪೀಠಕ್ಕೆ ಚುನಾಯಿಸಿ ಈತನ ಗಣಿತ ಪ್ರತಿಭೆಯನ್ನು ಗೌರವಿಸಿದರು.

	ಕೇಲಿ ಮುಖ್ಯವಾಗಿ ಕಾರ್ಯಪ್ರವೃತ್ತನಾಗಿದ್ದದ್ದು ಸೈದ್ಧಾಂತಿಕ ಗತಿವಿಜ್ಞಾನ ಮತ್ತು ಗಣಿತೀಯ ಖಗೋಳಶಾಸ್ತ್ರ ಕ್ಷೇತ್ರಗಳಲ್ಲಿ. ಈತನ ಟ್ರೇಟೈಸ್ ಆನ್ ಎಲಿಪ್ಟಿಕ್ ಫಂಕ್ಷನ್ ಎಂಬ ಗ್ರಂಥ 1876ರಲ್ಲಿ ಪ್ರಕಟವಾಯಿತು. ಸುಮಾರು ಒಂದು ಸಾವಿರದಷ್ಟು ಇದ್ದ ಈತನ ಸಂಶೋಧನಪ್ರಬಂಧಗಳನ್ನು 13 ಬೃಹದ್ಗ್ರಂಥಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಕೋಶಿ, ಆಯ್ಲರ್ ಮಟ್ಟದ ಪ್ರತಿಭಾನ್ವಿತನೀತ ಎಂದು ವಿದ್ವಾಂಸರ ಅಭಿಪ್ರಾಯ. ಅಚರಸಿದ್ಧಾಂತ (ಇನ್ವೇರಿಯಂಟ್ ಥಿಯೊರಿ), ಸಹಚರಗಳ ಉತ್ಪನ್ನಗಳನ್ನು ಪಡೆಯಲು ವಿಧಿಗಳು ಕ್ವಾಂಟಿಕುಗಳು. ಮಾತೃಕೆಗಳ ಬೀಜಗಣಿತ (ಆಲ್ಜೀಬ್ರ ಆಫ್ ಮ್ಯಾಟ್ರಿಸಸ್) ಟಿ- ಆಯಾಮಗಳಲ್ಲಿ ವಿಶ್ಲೇಷಣ ಜ್ಯಾಮಿತಿ, ವಕ್ರರೇಖೆಗಳ ಹಾಗೂ ಮೈಗಳ ವಿಕ್ಷೇಪ ಲಕ್ಷಣಗಳು (ಪ್ರೊಜೆಕ್ಟಿವ್ ಕ್ಯಾರೆಕ್ಟರಿಸ್ಟಿಕ್ಸ್) ಆಫ್ ಕವ್ರ್ಸ್ ಅಂಡ್ ಸರ್ಫೇಸಸ್). ಅಮೂರ್ತಗ್ರೂಪ್‍ಗಳ ಸಿದ್ಧಾಂತ. ಭೌತಖಗೋಳವಿಜ್ಞಾನ ಇವೇ ಮುಂತಾದ ಕ್ಷೇತ್ರಗಳಲ್ಲಿ ಕೇಲಿಯ ಸೃಷ್ಟಿಶೀಲ ಮನಸ್ಸು ವಿಹರಿಸಿ ಅಮೂಲ್ಯ ಸಾಧನೆಗಳನ್ನೂ ಸಿದ್ಧಿಗಳನ್ನೂ ನೀಡಿದೆ.

	ಜನವರಿ 26, 1895ರಲ್ಲಿ ಕೇಲಿ ಇಂಗ್ಲೆಂಡಿನಲ್ಲಿ ಗತಿಸಿದ. ಉದಾರಿಯೂ ಶ್ರೀಮಂತನೂ ಆದ ಕೇಲಿಯನ್ನು ಕುರಿತು ಮ್ಯಾಕ್ಸ್‍ವೆಲ್ ಬರೆದ ಮಾತು ಸಾಮಾನ್ಯ ಪ್ರದೇಶಕ್ಕೆ ಹೊಂದದ ಈತನ ಅತಿ ದೊಡ್ಡ ಜೀವ ಟಿ -ಆಯಾಮಗಳಲ್ಲಿ ವಿಹರಿಸಿತು ತೀರ ಸತ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ